ಗೌರಿಬಿದನೂರು-
ಕರ್ನಾಟಕದಲ್ಲಿ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು; ಅದರ ಮುಖ್ಯ ಪಟ್ಟಣ. ಕೋಲಾರ ಜಿಲ್ಲೆಯ ವಾಯುವ್ಯದಲ್ಲಿ ಉ.ಅ. 13025' - 13047' ಮತ್ತು ಪೂ. ರೇ. 77022' - 77043' ನಡುವೆ ಇರುವ ತಾಲ್ಲೂಕಿನ ಮೇರೆಗಳು ಹೀಗಿವೆ: ಪಶ್ಚಿಮದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳು. ಉತ್ತರದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕು. ಪೂರ್ವದಲ್ಲಿ ಕೋಲಾರ ಜಿಲ್ಲೆಯ ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕುಗಳು. ದಕ್ಷಿಣದಲ್ಲಿ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು. ಗೌರಿಬಿದನೂರು ತಾಲ್ಲೂಕಿನ ವಿಸ್ತೀರ್ಣ 881.7ಚ.ಕಿ.ಮೀ. ಜನಸಂಖ್ಯೆ 2,71,068 (2001). ಗೌರಿಬಿದನೂರು. ಹೊಸೂರು, ಮಂಚೇನಹಳ್ಳಿ, ನಗರಗೆರೆ, ದಾರಿನಾಯ್ಕನಪಾಳ್ಯ. ತೊಂಡೆಬಾವಿ - ಇವು ಇಲ್ಲಿಯ ಹೋಬಳಿಗಳು. ತಾಲ್ಲೂಕಿನಲ್ಲಿ 204 ಗ್ರಾಮಗಳೂ 2 ಪಟ್ಟಣಗಳೂ ಇವೆ. ತಾಲ್ಲೂಕಿನ ಆಗ್ನೇಯ ದಿಕ್ಕಿನಿಂದ ಉತ್ತರ ದಿಕ್ಕಿಗೆ ಉತ್ತರ ಪಿನಾಕಿನಿ ನದಿ ಹರಿಯುತ್ತದೆ. ಇಡೀ ತಾಲ್ಲೂಕು ಈ ನದಿಕಣಿವೆ ಪ್ರದೇಶ. ಪೂರ್ವದಲ್ಲಿ ನಂದೀದುರ್ಗ ಗಿರಿಶ್ರೇಣಿಯೂ ಪಶ್ಚಿಮದಲ್ಲಿ ಮಾಕಳಿದುರ್ಗದಿಂದ ಆರಂಭವಾಗುವ ಗಿರಿಪಂಕ್ತಿಯೂ ಈ ತಾಲ್ಲೂಕನ್ನು ತಬ್ಬಿ ಹಿಡಿದಿದೆ. ಉತ್ತರ ಪಿನಾಕಿನಿಯ ಒಂದು ಉಪನದಿ ಕುಮುದ್ವತಿ ಅಥವಾ ಕುಂದಾರ್. ಇದು ಬೆಂಗಳೂರು ಜಿಲ್ಲೆಯಲ್ಲಿ ಮಾಕಳಿದುರ್ಗದ ಪಶ್ಚಿಮದಲ್ಲಿ ಉಗಮಿಸಿ, ದಕ್ಷಿಣೋತ್ತರವಾಗಿ ತಾಲ್ಲೂಕಿನ ಮೂಲಕ ಹರಿದು, ಮಧುಗಿರಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮಾಕಳೀದುರ್ಗದ ಪೂರ್ವದಿಂದ ಸಣ್ಣ ಹೊಳೆಯೊಂದು ತೊಂಡೆಬಾವಿ ಹೋಬಳಿಯ ಮೂಲಕ ಹರಿದು ಬೊಮ್ಮಸಂದ್ರಕ್ಕೆ ಪೂರ್ವದಲ್ಲಿ ಉತ್ತರ ಪಿನಾಕಿನಿಯನ್ನು ಕೂಡುತ್ತದೆ.

ತಾಲ್ಲೂಕು ಅಕ್ಕಪಕ್ಕದ ತಾಲ್ಲೂಕುಗಳಿಗಿಂತ ತಗ್ಗಿನಲ್ಲಿದೆ. ನೆಲ ಸಡಿಲ, ಫಲವತ್ತು. ಗೌರಿಬಿದನೂರು ಪಟ್ಟಣದ ಬಳಿ ನೀರು ಮೇಲೆಯೇ ಸಿಗುತ್ತದೆ. ಜೊತೆಗೆ ನದಿ ನಾಲೆಗಳಿಂದ ನೀರಾವರಿ ಸೌಕರ್ಯವಿದೆ. ಬತ್ತ, ಕಬ್ಬು, ಅರಸಿನ, ತೆಂಗು, ಅಡಕೆ ಮುಖ್ಯ ಬೆಳೆಗಳು. ಬೆಟ್ಟ ಪ್ರದೇಶದಲ್ಲಿ ಮರಸೇಬು ವಿಶೇಷ.

ಬೆಂಗಳೂರು - ಗುಂತಕಲ್ ರೈಲುಮಾರ್ಗ ತಾಲ್ಲೂಕಿನ ಮಧ್ಯಭಾಗದಲ್ಲಿ ದಕ್ಷಿಣೋತ್ತರವಾಗಿ ತೊಂಡೆಬಾವಿ, ಗೌರಿಬಿದನೂರು ಮತ್ತು ದೊಡ್ಡಕುರುಗೋಡು ಮೂಲಕ ಹಾದುಹೋಗುತ್ತದೆ. ಗೌರಿಬಿದನೂರು ಪಟ್ಟಣದಿಂದ ಗುಡಿಬಂಡೆ, ಚಿಕ್ಕಬಳ್ಳಾಪುರ, ಹಿಂದೂಪುರ ಮುಂತಾದ ಸ್ಥಳಗಳಿಗೂ ತೊಂಡೆಬಾವಿಯಿಂದ ಮಧುಗಿರಿಗೂ ರಸ್ತೆಗಳುಂಟು.

ಗೌರಿಬಿದನೂರು ಈ ತಾಲ್ಲೂಕಿನ ಆಡಳಿತ ಕೇಂದ್ರ. ಇದು ಕೋಲಾರಕ್ಕೆ ವಾಯುವ್ಯದಲಿ90 ಕಿ.ಮೀ. ದೂರದಲ್ಲಿ ಉತ್ತರ ಪಿನಾಕಿನಿ ನದಿಯ ಎಡದಂಡೆಯ ಮೇಲಿದೆ. ಬೆಂಗಳೂರು - ಗುಂತಕಲ್ ರೈಲುಮಾರ್ಗದಲ್ಲಿ ಇದೊಂದು ನಿಲ್ದಾಣ. ದೊಡ್ಡಬಳ್ಳಾಪುರ ಹಿಂದೂಪುರ ರಸ್ತೆ ಇದರ ಮೂಲಕ ಸಾಗುತ್ತದೆ. ಬೆಂಗಳೂರಿನಿಂದ ಇಲ್ಲಿಗೆ 80 ಕಿ.ಮೀ ದೂರ. ಇಲ್ಲಿ ಪುರಸಭೆ ಇದೆ. ಜನಸಂಖ್ಯೆ 30,530 (2001).

ಇದು ಹಿಂದೆ ವಿದುರನ ವಾಸಸ್ಥಳವಾಗಿತ್ತೆಂದೂ ಅದ್ದರಿಂದ ಇದಕ್ಕೆ ವಿದುರೂರು ಎಂಬ ಹೆಸರಿತ್ತೆಂದೂ ಹೇಳಲಾಗಿದೆ. ಇಲ್ಲಿಗೆ 6 ಕಿ.ಮೀ. ಉತ್ತರದಲ್ಲಿ, ದೊಡ್ಡ ಕುರುಗೋಡು ಬಳಿ ವಿದುರನೇ ನೆಟ್ಟನೆಂದು ನಂಬಲಾದ ಒಂದು ಅಶ್ವತ್ಥವೃಕ್ಷವುಂಟು. ಇದನ್ನು ಜನರು ಪೂಜಿಸುತ್ತಾರೆ. 1938ರ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಆಗಿನ ಸಂಸ್ಥಾನ ಸರ್ಕಾರದ ಪ್ರತಿಬಂಧಕಾಜ್ಞೆಯನ್ನುಲ್ಲಂಘಿಸಿ ಕಾಂಗ್ರಸ್ ಧ್ವಜವನ್ನು ಆರೋಹಣ ಮಾಡಲು ಸತ್ಯಾಗ್ರಹಿಗಳು ಪ್ರಯತ್ನಿಸಿದಾಗ ಪೋಲೀಸರು ಗುಂಡು ಹಾರಿಸಿದ ಫಲವಾಗಿ ಹತ್ತು ಮಂದಿ ಮಡಿದರು. ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರ ಹೋರಾಟದಲ್ಲಿ ಈ ದುರಂತ ಒಂದು ಮರೆಯದ ನೆನಪು.

	 ಹಿಂದೆ ಗೌರಿಬಿದನೂರು ಪಟ್ಟಣ ದಾರಿನಾಯ್ಕನಪಾಳ್ಯದ ಒಡೆಯನ ವಶದಲ್ಲಿತ್ತು. ಆತ ತನ್ನ ಮಗಳಾದ ಗೌರಿಗೆ ಇದನ್ನು ಬಳುವಳಿಯಾಗಿ ಕೊಟ್ಟ. ವಿದುರೂರು ಎಂಬ ಹೆಸರಿಗೆ ಆಕೆಯ ಹೆಸರೂ ಸೇರಿಕೊಂಡು ಇದು ಗೌರಿವಿದುರೂರು ಎನಿಸಿಕೊಂಡಿತು. ಅನಂತರ ಮುಸ್ಲಿಮರು ಇದನ್ನು ಗೋರಿಬಿದನೂರು ಎಂದು ಕರೆದರು. ಇದರ ಬಳಿಯಲ್ಲಿ ನಿರ್ಮಿಸಲಾಗಿದ್ದ ಗೋರಿಗಳಿಂದ ಇದಕ್ಕೆ ಈ ಹೆಸರು ಬಂತು. ಉತ್ತರ ಪಿನಾಕಿನಿ ನದಿಯ ಆಚೆಯ ದಡದಲ್ಲಿ ಹಿರೇಬಿದನೂರಿನಲ್ಲಿ, ಬಿಜಾಪುರ ಒಬ್ಬ ಶ್ರೀಮಂತನಾಗಿದ್ದ ಹುಸೇನ್ ಷಹ ಮಿರ್ಜಾನ ದರ್ಗಾ ಇದೆ. ಹುಸೇನ್ ಷಹ ಮಿeóರ್Á, ಆತನ ಹೆಂಡತಿ ಸೈದನಿ ಬೀ, ಸೊಸೆ ನ್ಯಾಮತ್ ಬೀ, ನ್ಯಾಮತಳ ಮಗಳು ಸಕೀಮಾ ಬೀ, ಇವರ ಗೋರಿಗಳಿವೆ. ನ್ಯಾಮತ್‍ಬೀ ತುಂಬ ಪರಿಶುದ್ಧ ಜೀವನ ನಡೆಸುತ್ತಿದ್ದದ್ದರಿಂದ ಇದಕ್ಕೆ ನ್ಯಾಮತ್ ಬೀ ದರ್ಗಾ ಎಂದೂ ಹೆಸರು ಬಂದಿದೆ. ಅದೇ ಕಾಲದಲ್ಲಿ ಕಟ್ಟಲಾದ ದರ್ಗಾ ಒಂದು ಗೌರಿಬಿದನೂರಿನಲ್ಲೂ ಇದೆ. ಅದು ಜಲಾಲ್ ಬಖಾರಿ ವಲಿಯ ದರ್ಗಾ.

ಗೌರೀಬಿದನೂರಿನ ವೆಂಕಟರಮಣ ದೇವಸ್ಥಾನದ ವಿಗ್ರಹದ ಎತ್ತರ 4. ಇಲ್ಲಿಯ ಇನ್ನೊಂದು ದೇವಸ್ಥಾನ ನವಗ್ರಹಗಳದ್ದು. ರೈಲುಮಾರ್ಗ ನಿರ್ಮಾಣವಾದುದಂದಿನಿಂದ ಗೌರಿಬಿದನೂರು ಪ್ರವರ್ಧಮಾನವಾಗಿದೆ. ಇಲ್ಲೊಂದು ಸಕ್ಕರೆ ಕಾರ್ಖಾನೆಯುಂಟು. ಒಂದು ಕಾಲೇಜೂ ಇದೆ. ಗೌರಿಬಿದನೂರಿನಲ್ಲಿ ಭಾಭಾ ಅಣುಶಕ್ತಿ ಸಂಶೋಧನ ಸಂಸ್ಥೆಗೆ ಸೇರಿದ ಭೂಕಂಪನ ಮಾಪನ ಕೇಂದ್ರವೊಂದುಂಟು.
							(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ